ಜನಪದ ಧರ್ಮ -
ಅತಿಮಾನುಷ ಶಕ್ತಿಗಳ ಬಗೆಗೆ ಮಾನವ ಹೊಂದಿರುವ ಮನೋಭಾವವನ್ನೇ ಧರ್ಮ ಎಂದು ಕರೆಯುವುದು. ಜನಪದ ಎನ್ನುವುದನ್ನು ಗ್ರಾಮೀಣ, ಪುರಾತನ, ಆದಿವಾಸಿ, ಅನಾಗರಿಕ ಎಂದು ಇಟ್ಟುಕೊಂಡಾಗ ಅಂಥ ಜನರ ನಡುವೆ ಪ್ರಚಲಿತವಿರುವ ಧಾರ್ಮಿಕ ನೀತಿ-ರೀತಿಗಳನ್ನು ಜನಪದ ಧರ್ಮ ಎಂದು ಕರೆಯಬಹುದು. ಯಾವಾಗ ಮನುಷ್ಯ ತನಗಿಂತಲೂ ಅತೀತವಾದ ನಿಗೂಢವಾದ ಬಾಹ್ಯಶಕ್ತಿಗಳ ಮೇಲೆ ಅವಲಂಬನ ಭಾವನೆಯನ್ನು ತಾಳಿದನೊ ಅಂದಿನಿಂದ ಧಾರ್ಮಿಕ ಭಾವನೆ, ಪೂಜೆ ಮತ್ತು ಪ್ರಾರ್ಥನೆಗಳು ಜನ್ಮತಾಳಿದುವು. ಪವಿತ್ರ ಶಕ್ತಿಗಳಿಗೆ ಸಂಬಂಧಿಸಿದಂತೆ ನಂಬಿಕೆ ಮತ್ತು ಅನುಷ್ಠಾನಗಳ ಸಂಘಟಿತ ಪದ್ಧತಿಯೊಂದು ಪ್ರಚಲಿತವಾಯಿತು. ಮಾನವ ತನ್ನ ದೈನಂದಿನ ಜೀವನವನ್ನು ನಡೆಸಲು ಆರ್ಥಿಕ, ವೈವಾಹಿಕ, ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಗಳನ್ನು ಮಾಡಿಕೊಂಡಂತೆ ಧಾರ್ಮಿಕ ವ್ಯವಸ್ಥೆಯೊಂದು ಬೇಕಾಯಿತು. ಅತಿ ಮಾನುಷ ಕಲ್ಪನೆಯ ಜೊತೆಯಲ್ಲಿ ಮಾನವ ಮಾಡಿಕೊಂಡ ವ್ಯವಸ್ಥೆಯ ರೀತಿ ಮತ್ತು ಮಾದರಿಯೇ ಇದು. ಬಹಳ ಕಾಲದ ವರೆಗೆ ಧರ್ಮ ನಾಗರಿಕತೆಯ ಉತ್ಪನ್ನ ಮಾತ್ರ ಎಂಬ ಅಭಿಪ್ರಾಯವೇ ರೂಢವಾಗಿತ್ತು. ಆದರೆ ಅನಾಗರಿಕ ಸಮಾಜಗಳು ಧಾರ್ಮಿಕ ಚಟುವಟಿಕೆಗಳನ್ನು ಹೊಂದಿವೆ ಎಂಬುದನ್ನು ಇತ್ತೀಚೆಗೆ ವಿವರಿಸಿದ ಮೇಲೆ, ಜನಪದ ಧರ್ಮದ ಅಧ್ಯಯನ ಸ್ಪಷ್ಟರೂಪವನ್ನು ತಾಳಿಕೊಂಡಿತು.

ಜನಪದ ಧರ್ಮದ ಎರಡು ಪ್ರಧಾನ ಅಂಶಗಳೆಂದರೆ ನಂಬಿಕೆ ಮತ್ತು ಆಚರಣೆಗಳು. ಮೊದಲನೆಯದು ಧರ್ಮದ ಸ್ಥಾಯಿ ಭಾಗವಾದರೆ, ಎರಡನೆಯದು ಕ್ರಿಯಾಶೀಲ ಭಾಗವಾಗುತ್ತದೆ. ಅತಿಮಾನುಷದ ಕಡೆಗಿನ ಜನಪದದ ಮಾನಸಿಕ ಭಾವನೆ ವ್ಯಾಪಕವಾಗಿ ಪ್ರಕಟಗೊಂಡಿರುವುದು ಇವುಗಳ ಮೂಲಕವಾಗಿಯೇ. ಎಲ್ಲ ಧರ್ಮಗಳೂ ನಂಬಿಕೆ ಮತ್ತು ಆಚರಣೆಯ ತಳಹದಿಯನ್ನು ಹೊಂದೇ ಇರುತ್ತವೆ. ಆಚರಣೆ ಧರ್ಮಕ್ಕೆ ಸಂಬಂಧಿಸಿದಂತೆ ನಡೆಯುವ ಒಂದು ಸಾಮೂಹಿಕ ಅನುಷ್ಠಾನ. ಪ್ರಾರ್ಥನೆ, ಸಂತರ್ಪಣೆ, ನೃತ್ಯ, ಗೀತ ಮುಂತಾದುವು ಇದಕ್ಕೆ ಉದಾಹರಣೆಗಳಾಗುತ್ತವೆ. ಧಾರ್ಮಿಕ ಭಾವನೆಗಳನ್ನು ಸಲಹುವುದರಲ್ಲಿ ಧಾರ್ಮಿಕ ನಂಬಿಕೆಗಿಂತ ಆಚರಣೆ ಅತ್ಯಂತ ಪ್ರಮುಖವೆಂದು ಕೆಲವರ ಅಭಿಪ್ರಾಯ. ಇದು ವ್ಯಕ್ತಿ ಮತ್ತು ಅತಿಮಾನುಷ ಶಕ್ತಿಗಳ ನಡುವೆ ಸಂಪರ್ಕ ಸ್ಥಾಪಿಸುವ ಕೆಲವೊಂದು ಕ್ರಿಯಾವಿಧಿಯ ರೂಪದಲ್ಲಿರುತ್ತದೆ. ನಂಬಿಕೆಗಳು ಆಚರಣೆಗಳಿಗೆ ಶಾಸನಗಳಾಗುತ್ತವಲ್ಲವೆ ಅವು ಸುರಕ್ಷಿತವಾಗಿ ನಡೆದುಕೊಂಡು ಬರುವಂತೆ ನೋಡಿಕೊಳ್ಳುತ್ತವೆ.

ಪುರಾತನವಾದ ಜನಪದ ಧರ್ಮದಲ್ಲಿ ನಾಗರಿಕ ಧರ್ಮದಲ್ಲಿರುವಂತೆ ತಾತ್ತ್ವಿಕ ಚಿಂತನೆಯಾಗಲಿ, ತರ್ಕಬದ್ಧತೆಯಾಗಲಿ ಇರುವುದಿಲ್ಲ. ಜನಪದ ಧರ್ಮದಲ್ಲಿನ ಅತಿಮಾನುಷ ಸ್ವರೂಪ ಸಮಾಜದಿಂದ ಸಮಾಜಕ್ಕೆ, ಜನತೆಯಿಂದ ಜನತೆಗೆ ವ್ಯತ್ಯಾಸವಾಗುತ್ತದೆ. ಕೆಲವು ಕಡೆ ಈ ಅತಿಮಾನುಷ ಅಂಶ ಭೂತಪ್ರೇತಗಳಿಂದ ಸಂಯೋಜಿತವಾಗಿರಬಹುದು; ಇನ್ನು ಕೆಲವೆಡೆ ಇದು ಜಗತ್ತಿನ ಪ್ರತಿಯೊಂದರಲ್ಲಿಯೂ ವ್ಯಾಪಿಸಿಕೊಂಡಿರುವ, ವ್ಯಕ್ತಿರೂಪವಲ್ಲದ ಶಕ್ತಿಯಾಗಿರಬಹುದು; ಮತ್ತೆ ಕೆಲವೆಡೆ ಮನುಷ್ಯತ್ತ್ವವನ್ನು ಆರೋಪಿಸಬಹುದಾದ ದೇವದೇವತೆಗಳಾಗಿರಬಹುದು. ಪುರಾತನರಲ್ಲಿ ಈ ಅತಿ ಮಾನುಷತೆ ಪವಿತ್ರ ಮತ್ತು ಪ್ರಾಪಂಚಿಕ ಭಾಗಗಳೆಂದು ಒಡೆದುಕೊಳ್ಳುತ್ತದೆ. ಪವಿತ್ರ ಭಾಗ ಧರ್ಮವೆಂದು ಕರೆಸಿಕೊಂಡರೆ, ಪ್ರಾಪಂಚಿಕ ಭಾಗ ಮಂತ್ರವಿದ್ಯೆ ಎಂದು ಕರೆಸಿಕೊಳ್ಳುತ್ತದೆ.

ಧರ್ಮವನ್ನು ಕುರಿತು ಅನೇಕ ವಿವರಣೆಗಳು ಪ್ರಸಿದ್ಧವಾಗಿವೆ. ಇವೆಲ್ಲ ವಿವಿಧ ಕಾಲಗಳಲ್ಲಿ ಇದ್ದ ಭಿನ್ನ ಸಮಾಜಗಳಲ್ಲಿನ ಅತಿಮಾನುಷ ಕಲ್ಪನೆಗಳನ್ನು ವಿವರಿಸುವವೇ ಆಗಿವೆ. ಇವುಗಳಲ್ಲಿ ಕೆಲವು ಪ್ರಾಕೃತ ಸ್ಥಿತಿಯಿಂದ ಮುಂದುವರಿದ ರೂಪಗಳಿಗೆ ಧರ್ಮ ವಿಕಾಸವಾದುದನ್ನು ಹೇಳಿದರೆ, ಇನ್ನು ಕೆಲವು ಧರ್ಮದ ಕಾರ್ಯಗಳ ಮೇಲೆ ಕೇಂದ್ರೀಕೃತವಾಗುತ್ತವೆ.
ಮೊದಲ ಗುಂಪಿನಲ್ಲಿ ಸರ್ವಚೇತನವಾದ, ಶಕ್ತಿವಾದ ಮತ್ತು ಪ್ರಕೃತಿವಾದಗಳು ಪ್ರಮುಖವಾಗಿವೆ. ಮನುಷ್ಯ, ಪ್ರಾಣಿ, ಪಕ್ಷಿಗಳೆನ್ನದೆ ಎಲ್ಲದರಲ್ಲಿಯೂ ಆತ್ಮವಿದೆ ಎಂಬ ಕಲ್ಪನೆಯಿಂದಾದುದು ಸರ್ವಚೇತನವಾದ. ಇದರ ಪ್ರಕಾರ ಆತ್ಮದ ಕಲ್ಪನೆ ಎಂಬ ಕಲ್ಪನೆಯಿಂದಾದುದು ಸರ್ವಚೇತನವಾದ. ಇದರ ಪ್ರಕಾರ ಆತ್ಮದ ಕಲ್ಪನೆ ಧರ್ಮದ ಕೇಂದ್ರವಾಗಿದೆ. ಪುರಾತನ ಮಾನವನಿಗಾದ ಕೆಲವು ಅನುಭವಗಳನ್ನು ಇಟ್ಟುಕೊಂಡು ಇದನ್ನು ವಿವರಿಸಬಹುದು. ಆತ ತನ್ನ ಕನಸುಗಳಲ್ಲಿ ಕೂಡ ವಿವಿಧ ಚಟುವಟಿಕೆಗಳಲ್ಲಿ ನಿರತನಾಗಿರುತ್ತಿದ್ದ. ಸತ್ತ ಪೂರ್ವಜರನ್ನು ಕಾಣುತ್ತಿದ್ದ. ಎಚ್ಚೆತ್ತಿದ್ದಾಗ ತನ್ನ ಧ್ವನಿಯನ್ನೇ ಮರುಧ್ವನಿಯನ್ನಾಗಿ ಕೇಳುವುದು, ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಾಣುವುದು, ನೆರಳು ತನ್ನಿಂದ ಬೇರೆಯಾಗದೆ ಇರುವುದನ್ನು ಗಮನಿಸುವುದು-ಮುಂತಾದವು ಅವನನ್ನು ಯೋಚಿಸುವಂತೆ ಮಾಡಿದುವು. ಸಾವಿಗೂ ನಿದ್ರೆಗೂ ವ್ಯತ್ಯಾಸ ತಿಳಿಯುತ್ತಿರಲಿಲ್ಲ. ಅಗೋಚರ ಶಕ್ತಿಯೊಂದು ಅವನಲ್ಲಿದ್ದಾಗ ಜೀವಂತವಿರುತ್ತಾನೆ ; ಅದು ಅವನನ್ನು ತ್ಯಜಿಸಿದಾಗ ಅವನು ಸಾಯುತ್ತಾನೆ. ಇದನ್ನೆ ಆತ್ಮ ಎಂದು ಕರೆಯುವುದು. ಆದರೆ ನಿದ್ರೆ ಸಾವಲ್ಲದಿರುವುದು, ಕನಸುಗಳಲ್ಲಿ ವಿವಿಧ ಅನುಭವಗಳನ್ನು ಪಡೆಯುವುದು ಮೊದಲಾದವುಗಳಿಂದ ಪುರಾತನ ಮನುಷ್ಯ ತನ್ನಲ್ಲಿ ಎರಡು ಆತ್ಮಗಳಿರಬೇಕೆಂದು ನಂಬಿದ : ಒಂದು, ಮನುಷ್ಯನಿಂದ ಹೊರಗೆ ಹೋಗಿ ಅನುಭವಗಳನ್ನು ಆರ್ಜಿಸುವ ಸ್ವತಂತ್ರ ಆತ್ಮ; ಇನ್ನೊಂದು ದೇಹಾಂತರ್ಗತವಾಗಿರುವ ಆತ್ಮ. ಈ ಅಂತರಾತ್ಮ ಶಾಶ್ವತವಾಗಿ ದೇಹವನ್ನು ತ್ಯಜಿಸಿದಾಗ ವ್ಯಕ್ತಿ ಸತ್ತು, ಅವನ ಆತ್ಮ ಪ್ರೇತವಾಗುತ್ತದೆ. ಮೃತಾತ್ಮರನ್ನು ಕನಸಿನಲ್ಲಿ ಕಾಣುವುದರಿಂದ ಆತ್ಮ ಅಮರವೆಂದು ಭಾವಿಸಲಾಯಿತು. ಈ ಆತ್ಮ ದೇಹವನ್ನು ತಾತ್ಕಾಲಿಕವಾಗಿ ಬಿಟ್ಟಿದೆಯೇ ಇಲ್ಲ ಶಾಶ್ವತವಾಗಿ ತ್ಯಜಿಸಿದೆಯೇ ಎಂಬ ಅನಿಶ್ಚಯದ ಕಾರಣದಿಂದ, ಆದಿವಾಸಿಗಳು ಎರಡು ಸಾರಿ ಶವಸಂಸ್ಕಾರ ಮಾಡುತ್ತಾರೆ : ಮೊದಲನೆಯದು ಸಾವು ಸಂಭವಿಸಿದ ಕೂಡಲೆ ನಡೆಯುವಂಥದು, ಎರಡನೆಯದು ಆತ್ಮ ಹಿಂದಿರುಗುವ ಎಲ್ಲ ಆಶೆಯನ್ನೂ ಕಳೆದುಕೊಂಡ ಮೇಲೆ. ಕೆಲವು ದಿವಸಗಳ ಅನಂತರ ಆಚರಿಸುವಂಥದು. ಎರಡನೆಯದನ್ನೇ ನಾವು ಶ್ರಾದ್ಧ ಎಂದು ಕರೆಯುವುದು.
ಈ ಅಲೌಕಿಕ ಜೀವಿಗಳ ಬಗೆಗಿನ ಭಯ-ಗೌರವ ಭಾವನೆಗಳೇ ಜನಪದ ಧರ್ಮದ ಆದಿಮ ರೂಪವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಲೌಕಿಕ ಜೀವಿಗಳು ನಮ್ಮ ಹಿಡಿತದಲ್ಲಿಲ್ಲ. ಆದ್ದರಿಂದ ಅವರು ನಮಗೆ ತೊಂದರೆ ಉಂಟು ಮಾಡುವುದಕ್ಕೆ ಬದಲಾಗಿ ಸಹಾಯ ಮಾಡುವಂತೆ ಒಲಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರಾಧನೆಯ ಪ್ರಾಚೀನ ರೂಪವಾದ ಪೂರ್ವಜರ ಪೂಜೆ ರೂಢಿಗೆ ಬಂತು. ಸಮಾಧಿಗಳೇ ಪುರಾತನ ದೇವಾಲಯಗಳಾದುವು. ಮಾನವ ಜೀವನದಲ್ಲಿ ಅಲೌಕಿಕ ಜೀವಿಗಳು ವಹಿಸಿದ ಪಾತ್ರವನ್ನು ಕುರಿತಂತೆ ಬೆಳೆದ ನಂಬಿಕೆಯೇ ಸರ್ವಚೇತನವಾದವೆನಿಸಿತು. ಇದು ಒಮದು ಬಗೆಯ ಬಹುದೇವತಾರಧನೆ ಎಂದು ಹೇಳಬಹುದು. ಇದೇ ಕ್ರಮೇಣ ಏಕದೇವತಾರಾಧನೆಯಾಗಿ ವಿಕಾಸ ಪಡೆಯಿತೆಂದು ಕೆಲವರು ಹೇಳುತ್ತಾರೆ.
ಆದರೆ ಪುರಾತನ ಮಾನವನನ್ನು ತಾತ್ತ್ವಿಕನನ್ನಾಗಿ ಮತ್ತು ತಾರ್ಕಿಕನನ್ನಾಗಿ ಮಾಡುವ ಈ ವಾದ ಉತ್ಪ್ರೇಕ್ಷೆಯಿಂದ ಕೂಡಿದುದೆಂದು ಹೇಳಬೇಕಾಗುತ್ತದೆ. ಏಕೆಂದರೆ, ಪುರಾತನ ಮನುಷ್ಯ ವಾಸ್ತವ ಜೀವನದಲ್ಲಿ ತೊಡಗಿರುತ್ತಾನೆಯೇ ಹೊರತು, ಈ ಸಿದ್ಧಾಂತ ಹೇಳುವ ಹಾಗೆ ಚಿಂತಿಸುವುದಿಲ್ಲ. ಅವನು ಬದುಕು ಮತ್ತು ಪ್ರಕೃತಿಯಲ್ಲಿ ಭಾಗಿಯಾಗುತ್ತಾನೆ. ಆದರೆ ಅದಕ್ಕೆ ಬೌದ್ಧಿಕ ವಾತಾವರಣವನ್ನು ಕಲ್ಪಿಸುವುದಿಲ್ಲ. ಹಾಗೆಯೇ, ಧಾರ್ಮಿಕ ವಿಕಾಸ ಬಹುದೇವತಾರಾಧನೆಯಿಂದ ಏಕದೇವತಾರಾಧನೆಗೆ ಬಂದಿತೆಂಬುದಕ್ಕೆ ಆಧಾರಗಳಿಲ್ಲ.
ಸರ್ವಚೇತನವಾದ ಧರ್ಮದ ಇತಿಹಾಸದಲ್ಲಿ ಆಮೇಲೆ ಬಂದುದು. ಇದಕ್ಕಿಂತ ಮೊದಲು ಧಾರ್ಮಿಕ ನಂಬಿಕೆ ಪ್ರತಿಯೊಂದು ವಸ್ತುವಿಗೂ ಜೀವವಿದೆ ಎಂಬುದನ್ನು ಮಾತ್ರ ಹೇಳುವುದಾಗಿತ್ತು. ವಸ್ತುಪೂಜೆ ಪ್ರಾಯಶಃ ಧರ್ಮದ ಪ್ರಾಥಮಿಕ ರೂಪವೆಂದು ತೋರುತ್ತದೆ. ಭೌತಿಕ ವಸ್ತುಗಳನ್ನು ಕುರಿತಂತೆ, ಅವುಗಳಲ್ಲಿನ ರಹಸ್ಯಶಕ್ತಿಯ ಕಾರಣದಿಂದಾಗಿ ಬಂದ ಆರಾಧನೆಯೇ ಇದು. ಆರಾಧಕರ ಅಭೀಪ್ಸೆಗಳನ್ನು ಈಡೇರಿಸುವ ಅಥವಾ ಈಡೇರಿಸದಿರುವ ಕಾರಣಗಳಿಗೆ ಅನುಗುಣವಾಗಿ ವಸ್ತುವೊಂದರ ಆರಾಧನೆ ಅಥವಾ ನಿಂದನೆ ಇರುತ್ತಿತ್ತು. ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡಬಲ್ಲುದೆಂದು ಭಾವಿಸಲಾಗಿದ್ದು, ಅತೀತ ಶಕ್ತಿಗೆ ಆರೋಪಿಸಲಾಗಿದ್ದ ಇದನ್ನು ಅಕ್ಷರಪೂರ್ವ ಜನ ಮಾನಾ ಎಂದು ಕರೆಯುತ್ತಿದ್ದರು. ಇದರಿಂದ ಹುಟ್ಟಿಕೊಂಡ ಸಿದ್ಧಾಂತಕ್ಕೆ ಮಾನಾಯಿಸಂ ಎಂದು ಕರೆದರು. ಅವ್ಯಕ್ತ ಶಕ್ತಿಯಲ್ಲಿನ ನಂಬಿಕೆಯೇ ಈ ವಾದದ ತಿರುಳು. ಸಜೀವ ನಿರ್ಜೀವ ವಸ್ತುಗಳಲ್ಲೆಲ್ಲ ಇದು ನೆಲೆಸಿದೆ ಎಂಬುದಾಗಿ ವಿವರಿಸಲಾಯಿತು. ಈ ಅಸಾಧಾರಣ ಶಕ್ತಿಗೆ ಮಾಂತ್ರಿಕ ಸಾಮಥ್ರ್ಯವೂ ಇರುತ್ತದೆ. ಇದು ಭೌತಿಕ ಶಕ್ತಿಯ ಮೂಲಕ ಅಥವಾ ಇಂಥದೇ ವಿಶಿಷ್ಟ ಗುಣಗಳ ಮೂಲಕ ಮೈದೋರಬಹುದು.

ಪ್ರಕೃತಿವಾದ ಮತ್ತೊಂದು ಬಗೆಯದು. ಪ್ರಕೃತಿಯ ವಸ್ತುಗಳನ್ನು ಕುರಿತಂತೆ ಬಂದ ಆರಾಧನಾ ಪದ್ಧತಿಯೇ ಇದು. ಇದನ್ನು ಧರ್ಮದ ಅತ್ಯಂತ ಪ್ರಾಚೀನ ರೂಪವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ವಸ್ತುಗಳ ಬಗೆಗಿನ ಮಾನವನ ಭಯ ಅಥವಾ ಗೌರವಭಾವನೆ, ನಿರ್ಜೀವ ವಸ್ತುಗಳಿಗೆ ಸಜೀವತೆಯನ್ನು ಆರೋಪಿಸುವ ಮತ್ತು ಅದರಲ್ಲಿ ಎಲ್ಲ ಶಕ್ತಿಯನ್ನೂ ತುಂಬುವ ಅವನ ಮನೋವಿಕಾರದ ಫಲವೆಂದೇ ಹೇಳಬೇಕಾಗುತ್ತದೆ. ಈ ಮನೋವಿಭ್ರಾಂತಿಯಿಂದ ಸೂರ್ಯ ಉದಯಿಸುತ್ತಾನೆ ಮತ್ತು ಮುಳುಗುತ್ತಾನೆ. ಗುಡುಗು ಮಳೆಯನ್ನು ಕಳುಹಿಸುತ್ತದೆ, ಮರ ಹೂವು ಹಣ್ಣುಗಳನ್ನು ಕೊಡುತ್ತದೆ ಎಂಬ ಕಲ್ಪನೆ ಬಂದು, ಇವುಗಳ ಹಿಂದೆ ಶಕ್ತಿಯೊಂದು ಅಡಗಿದೆ ಎಂಬ ನಂಬಿಕೆ ಸೃಷ್ಟಿಯಾಗಲು ಕಾರಣವಾಯಿತು. ಈ ರೀತಿಯ ನಂಬಿಕೆಗಳಿಗೆ ವಿಕಾಸ ಹೊಂದದ ಮಾನವಮನಸ್ಸೇ ಕಾರಣವಾಗಿ, ಅವನಲ್ಲಿನ ವಿಚಾರಶಕ್ತಿಯ ಅಭಾವದಿಂದಾಗಿ ಪ್ರಕೃತಿ ಪೂಜೆ ಬಂದಿರಬೇಕೆಂದು ಕೆಲವರ ಅಭಿಪ್ರಾಯ. ಪ್ರಕೃತಿಯ ವಸ್ತುಗಳನ್ನು ಆರಾಧಿಸುವ ವಿಷಯದಲ್ಲಿ ತೊಡಕೇನೂ ಕಂಡುಬರುವುದಿಲ್ಲ. ಇದನ್ನು ಸಮರ್ಥಿಸುವ ಸಾಕಷ್ಟು ಆಧಾರಗಳು ದೊರೆಯುತ್ತವೆ. ಆದರೆ ಈ ಬಗೆಯ ಆರಾಧನೆಯ ಧರ್ಮದ ಪ್ರಾಚೀನ ರೂಪ ಎನ್ನುವುದರಲ್ಲಿ ಮಾತ್ರ ಸಂದೇಹ ಬರುತ್ತದೆ.

ಜನಪದ ಧರ್ಮವನ್ನು ಅದರ ಕಾರ್ಯಗಳ ಮೂಲಕ ವಿವರಿಸುವುದು ಮುಖ್ಯವಾಗಿದೆ. ಧರ್ಮಕ್ಕೂ ಮಾನವನ ವಿವಿಧ ಭಾವಾವೇಶಗಳಿಗೂ ನಿಕಟ ಸಂಬಂಧವಿರುವುದನ್ನು ನೋಡುತ್ತೇವೆ. ಸಮಾಜಗಳಲ್ಲಿ ಬೀಜ ಬಿತ್ತುವಾಗ, ಕೊಯ್ಲುಕುಯ್ಯುವಾಗಿ ಮೀನು ಹಿಡಿಯುವಾಗ, ಬೇಟೆಯಾಡುವಾಗ ಧಾರ್ಮಿಕ ಹಾಗೂ ಮಾಂತ್ರಿಕ ಆಚರಣೆಗಳು ಪ್ರಚಲಿತವಿರುವುದನ್ನು ಗುರುತಿಸಬಹುದು. ಪೂರ್ವೋಕ್ತ ಸಂದರ್ಭಗಳಲ್ಲಿ ಒದಗಬಹುದಾದ ಅಡಚಣೆಗಳ ಬಗೆಗಿನ ಭಯವೇ ಆ ಕುರಿತ ಆಚರಣೆಗಳಿಗೆ ಕಾರಣವಾಗಿವೆ. ಇದೇ ರೀತಿಯಲ್ಲಿ ಮಾನವ ಜೀವನದಲ್ಲಿ ಬರುವ ವಿವಿಧ ಪರಿಸ್ಥಿಗಳು ದ್ವೇಷ, ದುರಾಸೆ, ಕ್ರೋಧ, ಪ್ರೀತಿ ಮುಂತಾದ ಭಾವಗಳ ಹುಟ್ಟಿಗೆ ಕಾರಣವಾಗುತ್ತವೆ. ಈ ಪರಿಸ್ಥಿತಿಗಳು ಮನುಷ್ಯನ ಎಲ್ಲ ಚಟುವಟಿಕೆಗಳನ್ನೂ ಕಲಕುತ್ತವೆ. ಇಂಥ ಭಾವೋದ್ರೇಕದ ಪರಿಸ್ಥಿತಿಯಲ್ಲಿ ಮನುಷ್ಯ ತನ್ನ ದೈನಂದಿನ ಕೆಲಸಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ. ಇಂಥ ಸ್ಥಿತಿಯಲ್ಲಿ ಧರ್ಮ ವಿರೇಚಕ ಸಾಧನವಾಗಿ ಬಂದು, ಮನುಷ್ಯನ ಈ ಭಾವೋದ್ರೇಕ ಮನಸ್ಸನ್ನು ತೊಳೆಯುತ್ತದೆ. ಅಂದರೆ ಮನುಷ್ಯ ಮತ್ತು ಅತಿಮಾನುಷ ಶಕ್ತಿಯ ನಡುವೆ ಧಾರ್ಮಿಕ ವ್ಯವಸ್ಥೆಯೊಂದನ್ನು ಇದು ಮಾಡುತ್ತದೆ. ಹೀಗೆ ಧರ್ಮ ವ್ಯಕ್ತಿ ಜೀವನದಲ್ಲಿ ಶಾರೀರಿಕ ಹಾಗೂ ಮಾನಸಿಕ ಸ್ಥಿರತೆಯೊಂದನ್ನು ತರುವ ವಿಧಾನವಾಗಿ ಕೆಲಸ ಮಾಡುತ್ತದೆ.
ಆದರೆ ಕೆಲವರ ದೃಷ್ಟಿಯಲ್ಲಿ ಧರ್ಮದ ಕಾರ್ಯವೆಂದರೆ, ಮಾನವನ ಮನಸ್ಸಿನಿಂದ ಭಯ ಮತ್ತಿತರ ಭಾವೋದ್ರೇಕಗಳನ್ನು ವಿರೇಚನ ಮಾಡುವುದಲ್ಲ, ಅವಲಂಬನಾ ಭಾವನೆಯನ್ನು ತುಂಬುವುದಾಗಿರುತ್ತದೆ. ವ್ಯಕ್ತಿಗಿಂತ ಗುಂಪಿನ ಉಳಿವೇ ಇಲ್ಲಿ ಮುಖ್ಯ, ವ್ಯಕ್ತಿ ಏನಾದರೂ ತ್ಯಾಗಗಳನ್ನು ಮಾಡಿದರೆ, ಅದು ಅವನ ವೈಯಕ್ತಿ ಆಸಕ್ತಿಯಿಂದ ಮಾಡಿದುದಾಗಿರುತ್ತದೆ ; ಏಕೆಂದರೆ, ಸಾಮಾಜಿಕ ಉಳಿವಿಲ್ಲದೆ ವ್ಯಕ್ತಿಯ ಉಳಿವು ಅಸಾಧ್ಯವಾಗುತ್ತದೆ. ಇದನ್ನು ತಿಳಿಯದೆ ವ್ಯಕ್ತಿ ಇದಕ್ಕೆ ವಿರುದ್ಧವಾಗಿ ವರ್ತಿಸುವುದಾದರೆ, ಅದು ಸಾಮಾಜಿಕ ವ್ಯವಸ್ಥೆಯ ಏರುಪೇರಿಗೆ ಕಾರಣವಾಗುತ್ತದೆ. ಸಾಮಾಜಿಕ ಉಳಿವಿಗೆ ಕಟ್ಟಳೆಗಳ ಪಾಲನೆ ಅಗತ್ಯವಾಗಿರುತ್ತದೆ. ಆದ್ದರಿಂದ ಅತಿಮಾನುಷ ಶಕ್ತಿಯಲ್ಲಿನ ಹೆದರಿಕೆ ಮತ್ತು ಅದರಿಂದಾಗುವ ಶಿಕ್ಷೆಯ ಭೀತಿ, ಸ್ವರ್ಗ ನರಕಗಳ ಕಲ್ಪನೆ-ಇವು ಸಾಮಾಜಿಕವಾಗಿ ಸಮ್ಮತಿಸಿದ ವರ್ತನೆಗೆ ಬಹಳವಾಗಿ ನೆರವಾಗುತ್ತದೆ ; ಸಾಮಾಜಿಕ ವ್ಯವಸ್ಥೆ ಸುರಕ್ಷಿತವಾಗಿ ಉಳಿಯುತ್ತದೆ. ಇದು ಕಾರಣ ಧರ್ಮದ ಕಾರ್ಯ ಎರಡು ರೀತಿಯಲ್ಲಿ ವರ್ತಿಸಿದಂತಾಯಿತು. ಸಮಾಜದ ಮೇಲಿನ ಅವಲಂಬನಾ ಭಾವನೆ ಮತ್ತು ಅದರಿಂದಾಗುವ ಸಾಮಾಜಿಕ ಕಟ್ಟಳೆಗಳೊಡನೆ ವ್ಯಕ್ತಿಯ ಒಪ್ಪಿಗೆ, ಅಂತಿಮವಾಗಿ ಸಾಮಾಜಿಕ ಉಳಿವು. ಒಟ್ಟಿನಲ್ಲಿ ವ್ಯಕ್ತಿಗೆ ಸಮಾಜ ಎಷ್ಟು ಮುಖ್ಯವೋ ಸಮಾಜಕ್ಕೆ ವ್ಯಕ್ತಿಯೂ ಅಷ್ಟೇ ಮುಖ್ಯನಾಗುತ್ತಾನೆಂದು ಹೇಳಬಹುದು.

ಧಾರ್ಮಿಕ ವಿಚಾರಗಳು, ಸಾಮಾಜಿಕ ಸಮೂಹಗಳು ಹಬ್ಬ ಮತ್ತಿತರ ಸಾಮಾಜಿಕ ಕೂಟಗಳು ಸೇರಿದಾಗ ಹುಟ್ಟಿದವುಗಳು. ಇಂಥ ಸಂದರ್ಭಗಳಲ್ಲಿ ಸಾಮಾಜಿಕ ಜೀವನ ಆಸಕ್ತಿ ವಹಿಸುವುದಲ್ಲದೆ, ಮಾನವ ಮನಸ್ಸಿನ ಮೇಲೆ ಗುಂಪಿನ ಸರ್ವಶಕ್ತ ಭಾವನೆಯನ್ನು ಅಚ್ಚೊತ್ತುತ್ತದೆ. ಮನುಷ್ಯ ಏನಾಗಿದ್ದಾನೊ ಮತ್ತು ಏನೆಲ್ಲ ಹೊಂದಿದ್ದಾನೊ ಅದಕ್ಕೆಲ್ಲ ಇದು ಮೂಲ ಆಕರವಾಗಿ ಪರಿಣಮಿಸುತ್ತದೆ.

ಧರ್ಮ ಬೆಳೆಯುವುದಕ್ಕೆ ಕುಲದೇವತಾ ಪದ್ಧತಿಯೊಂದು (ನೋಡಿ- ಕುಲದೇವತಾ-ಪದ್ಧತಿ) ಮುಖ್ಯ ಕಾರಣ. ಪುರಾತನರು ಕೆಲವು, ಭೌತವಸ್ತುಗಳನ್ನು ತಮ್ಮ ಕುಲಪುರುಷರೆಂದು ಭಾವಿಸಿ ಪೂಜ್ಯಭಾವದಿಂದ ನಡೆದುಕೊಳ್ಳುತ್ತಿದ್ದುದನ್ನು ಇವೊತ್ತಿಗೂ ಕಾಣಬಹುದು. ಪ್ರಾಣಿ, ಸಸ್ಯ ಅಥವಾ ವಸ್ತುವೊಂದನ್ನು ಕುಲದೇವತೆಯೆಂದು ನಂಬಿ ಆರಾಧಿಸುತ್ತಿದ್ದ ಪದ್ಧತಿಯೇ ಇದು. ಇಂಥ ಕುಲದೇವತಾಪ್ರಾಣಿ, ಸಸ್ಯಗಳನ್ನು ಕೊಲ್ಲದ, ನಾಶಮಾಡದ, ತಿನ್ನದ ಕೆಲವು ನಿಷಿದ್ಧತೆಗಳು ಪ್ರಚಲಿತವಾಗಿವೆ. ಹೀಗೆ ಕುಲ ದೇವತೆಯಲ್ಲಿನ ನಂಬಿಕೆ ಮತ್ತು ಆ ಬಗೆಗಿನ ನಿಷಿದ್ಧತೆಗಳು ಪ್ರಚಲಿತವಾಗಿವೆ. ಈ ರೀತಿ ಕುಲದೇವತೆಯಲ್ಲಿನ ನಂಬಿಕೆ ಮತ್ತು ಆ ಬಗೆಗಿನ ನಿಷಿದ್ಧತೆಗಳು ಜನಪದ ಧರ್ಮವನ್ನು ಪೋಷಿಸಿವೆ, ಬೆಳೆಸಿವೆ.
ಮಾನವನಿಗೆ ಕಷ್ಟಪರಿಸ್ಥಿತಿಗಳು ಒದಗಿದಾಗ ಧರ್ಮ ಮತ್ತು ಮಂತ್ರವಿದ್ಯೆಯ ಮರೆಹೋಗುವುದು ಆದಿಯಿಂದಲೂ ರೂಢಿಯಲ್ಲಿದೆ. ಅಗೋಚರ ಶಕ್ತಿಗಳನ್ನು ಪ್ರಾರ್ಥನೆ ಪೂಜೆಗಳ ಮೂಲಕ ಒಲಿಸಿಕೊಂಡು ಇದನ್ನು ಈಡೇರಿಸಿಕೊಳ್ಳುತ್ತಿದ್ದ. ಮಾನವ ಭೂತಪ್ರೇತಗಳಲ್ಲಿ ಅಗಾಧ ನಂಬಿಕೆಯನ್ನು ಇಟ್ಟವನಾದ್ದರಿಂದ ಅವನ್ನು ಕೆಲವು ಮಾಟಮಂತ್ರಗಳ ಮೂಲಕ ತನ್ನ ಕಾರ್ಯಕ್ಕೆ ಒಗ್ಗಿಸಿಕೊಳ್ಳುತ್ತಿದ್ದುದನ್ನು ಕಾಣಬಹುದು.

ಧರ್ಮ ಭಾವೋದ್ರೇಕಗಳನ್ನೂ ಮಾನಸಿಕ ದೋಷಗಳನ್ನೂ ಪರಿಹರಿಸಿಕೊಳ್ಳುವುದಕ್ಕೆ ಸಾಧನವಾಗಿದೆ. ಅದು ಇಹ-ಪರದ ಸೇತುವಾಗಿರುವುದು ಮಾತ್ರವಲ್ಲದೆ, ಪ್ರಕೃತಿಯ ವಸ್ತುವಿಶೇಷಗಳೊಂದಿಗೆ ಸಂಬಂಧ ಏರ್ಪಡಿಸುತ್ತದೆ. ಜನಿಸಿದ ಮಕ್ಕಳು ಪೂರ್ವಜರ ಅವತಾರಗಳೆಂಬ ಆದಿವಾಸಿಯ ಶ್ರದ್ಧೆ ಪುನರ್ಜನ್ಮದಲ್ಲಿ ನಂಬಿಕೆ ಹುಟ್ಟಿಸಿತು, ಸತ್ತವರ ಬಗ್ಗೆ ಗೌರವಾದರಗಳನ್ನು ಕಲ್ಪಿಸಿತು. ಸತ್ತವರ ಆತ್ಮಗಳು ಮಳೆ ಕರೆಯುತ್ತವೆ. ವ್ಯವಸಾಯಕ್ಕೆ ಸಹಾಯ ಮಾಡುತ್ತವೆ. ಕಷ್ಟ ಪರಿಹರಿಸುತ್ತವೆ ಎಂಬೀ ಭಾವನೆಗಳೂ ಇದೇ ಪರಿಣಾಮವನ್ನು ತಂದುವು. ಹೀಗಾಗಿ ಸತ್ತವರಿಗೂ ಜೀವಂತ ಇರುವವರಿಗೂ ನಿಕಟ ಸಂಬಂಧವೊಂದನ್ನು ಧರ್ಮ, ಮಾಡಿಕೊಟ್ಟಿತು. ಸಾಮೂಹಿಕ ಚಟುವಟಿಕೆಯಾದ ಜನಪದ ಧರ್ಮ ಸಮೂಹ ಭಾವನೆ ಬೆಳೆಯುವುದಕ್ಕೆ, ಬುಡಕಟ್ಟುಗಳಲ್ಲಿ ಐಕ್ಯತೆಯೊಂದು ರೂಢಗೊಳ್ಳುವುದಕ್ಕೆ ತಳಹದಿಯನ್ನು ರೂಪಿಸಿತಲ್ಲದೆ, ಆಯಾ ಸಮೂಹದ ಸಾಂಸ್ಕøತಿಕ ಮೌಲ್ಯಗಳನ್ನು ರಕ್ಷಿಸಿದೆ.									 (ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ